ಬೆಂಗಳೂರು :
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ನಮ್ರತೆ, ಸಮಗ್ರತೆ, ನಿಸ್ವಾರ್ಥತೆ, ಪ್ರಾಮಾಣಿಕತೆ ಹಾಗೂ ಉತ್ಸಾಹದಿಂದ ಕೆಲಸ ನಿರ್ವಹಿಸಿ ಉತ್ತಮ ಹೆಸರನ್ನು ಪಡೆದಿದ್ದಾರೆ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ಹಂಗಾಮಿ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಅವರು ತಿಳಿಸಿದರು.
ಅವರು ಇಂದು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸುಮಾರು ಎಂಟು ವರ್ಷ ಏಳು ತಿಂಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿ ಹಿಡಿದು, ಜನರಿಗೆ ನ್ಯಾಯ ಕೊಡಿಸುವಲ್ಲಿ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪಾತ್ರ ದೊಡ್ಡದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮಿಟ್ಟಲ ಕೋಡ್. ಎಸ್.ಎಸ್. ಮಾತನಾಡಿ, ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ ಗ್ರಾಮದಲ್ಲಿ ಜೂನ್ 16, 1963 ರಂದು ತಂದೆ ಲೇಟ್ ವೆಂಕಟರಾಮಯ್ಯ, ತಾಯಿ ಸುಬ್ಬಲಕ್ಷ್ಮಮ್ಮನವರಿಗೆ ಜನಿಸಿದರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಶಿಕ್ಷಣವನ್ನು ಗುಡಿಬಂಡೆ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಗುಡಿಬಂಡೆಯಲ್ಲಿ ಪೂರೈಸಿದರು. ಕಾನೂನು ಪದವಿಯನ್ನು ಬೆಂಗಳೂರಿನ ಬಿ.ಎಂ.ಎಸ್ ಕಾನೂನು ಕಾಲೇಜಿನಲ್ಲಿ ಪಡೆದಿರುತ್ತಾರೆ.
1987ರಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೊಂದಾಯಿಸಿ, 1991ನೇ ಇಸವಿಯಲ್ಲಿ ಸ್ವತಂತ್ರ ವಕೀಲರಾಗಿ ನಂತರ ಸಿಟಿ ಸಿವಿಲ್ ನ್ಯಾಯಾಲಯ, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳ ಮುಂದೆ ವಿವಿಧ ಪ್ರಕರಣಗಳಲ್ಲಿ ವಕೀಲಿಕೆಯನ್ನು ನಡೆಸಿ ಅತ್ಯಲ್ಪ ಅವಧಿಯಲ್ಲಿಯೇ ಅತ್ಯುತ್ತಮ ವಕೀಲರೆಂದು ಪ್ರಸಿದ್ದಿಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.
2022ರಲ್ಲಿ ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡು, ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ತುಮಕೂರು ಜಿಲ್ಲೆ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬೆಂಗಳೂರು ಜಿಲ್ಲೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬೀದರ, ಚಿತ್ರದುರ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು 2016ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ, 2018ರಲ್ಲಿ ಘನ ನ್ಯಾಯಾಲದ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಅವರು ಸೇವಾಧಿಯಲ್ಲಿ ವಿಭಿನ್ನ ಕಾನೂನಿನ ಕ್ಷೇತ್ರಗಳಲ್ಲಿ ಹಲವು ಮಹತ್ವಪೂರ್ಣ ತೀರ್ಪುಗಳನ್ನು ನೀಡಿದ್ದಾರೆ.
ಅಲ್ಲದೆ 2018ನೇ ಇಸವಿಯಲ್ಲಿ ಜಗದೀಪ್ ಸಿಂಗ್ ಹತ್ಯೆ ಪ್ರಕರಣದಲ್ಲಿ, ಆರೋಪಿಗಳ ದೋಷಗಳನ್ನು ದೃಢಪಡಿಸಿ ಅವರ ಕೃತ್ಯಗಳ ಗಂಭೀರತೆಯನ್ನು ಉಲ್ಲೇಖಿಸಿದ್ದಾರೆ ಎಂದರು.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮಾತನಾಡಿ, ನ್ಯಾಯಾಲಯದಲ್ಲಿ ಪ್ರಾಮಾಣಿಕವಾಗಿ ಆತ್ಮ ಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ಪಾಲನೆ ಮಾಡಿದ್ದೇನೆ. ತಂದೆಯ ಪ್ರೋತ್ಸಾಹ, ತಾಯಿಯ ಶಿಸ್ತುಬದ್ದವಾದ ಜೀವನಶೈಲಿ, ಹೆಂಡತಿಯ ತ್ಯಾಗ ಜೀವನದಿಂದ ನ್ಯಾಯಮೂರ್ತಿಯಾಗಿ ಬೆಳೆದು ಇಂದು ವಯೋನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದರು.
ಅಲ್ಲದೆ ತಮ್ಮ ಸೇವಾ ಅವಧಿಯಲ್ಲಿ ಜೊತೆಯಲ್ಲಿದ್ದು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಯುವಪೀಳಿಗೆ ಆತ್ಮವಿಶ್ವಾಸದಿಂದ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಲು ಸಹ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಹಾಗೂ ವಕೀಲರು ಹಾಜರಿದ್ದರು.
Publisher: ಕನ್ನಡ ನಾಡು | Kannada Naadu